ಬಾಲಸರಸ್ವತಿ, ಟಿ
13.5.1918-9.2.1984 ಪ್ರಸಿದ್ಧ ನೃತ್ಯ ಕಲಾಕೋವಿದೆ; ಭರತನಾಟ್ಯ ಪ್ರವೀಣೆ. ನಾಟ್ಯ ಸಂಪ್ರದಾಯದಲ್ಲಿ ಒಂದು ಪರಂಪರೆಯ ಯುಗವನ್ನೇ ನಿರ್ಮಿಸಿದ ಮಹಾನ್ ಕಲಾವಿದೆ. `ಬಾಲಾ ಎಂಬ ಎರಡಕ್ಷರಗಳಿಂದಕರೆಸಿಕೊಳ್ಳುತ್ತಿದ್ದ ಇವರು ನಿಜವಾಗಿಯೂ ಅಭಿನಯ ಸರಸ್ವತಿಯಾಗಿದ್ದರು. ಪ್ರೇಕ್ಷಕರ ಮೇಲೆ ಸಮ್ಮೋಹನಾಸ್ತ್ರ ಬೀರುತ್ತಿದ್ದ ಇವರನಯವಂತಿಕೆ ವರ್ಣನಾತೀತ.
ಬಾಲಸರಸ್ವತಿ ದೇವದಾಸಿ ಕುಟುಂಬದಿಂದ ಹೊರಬಂದ ಅನಘ್ರ್ಯರತ್ನ. ಇವರ ಪೂರ್ವಿಕರಲ್ಲೊಬ್ಬರಾದ ಪಾಪಮ್ಮಾಳ್ ತಂಜಾವೂರು ದೊರೆಗಳ ಆಸ್ಥಾನ ನೃತ್ಯಕಲಾವಿದೆ. ಬಾಲಸರಸ್ವತಿ ಅವರ ಅಜ್ಜಿ ಧನಮ್ಮಾಳ್ ವೀಣಾ ಧನಂ ಎಂದೇ ಖ್ಯಾತಿಗೊಂಡಿದ್ದರು. ತಾಯಿ ಜಯಮ್ಮಾಳ್ ಪ್ರಸಿದ್ಧ ಸಂಗೀತ ವಿದುಷಿ ಎನಿಸಿಕೊಂಡಿದ್ದರು. ಇಂಥ ಕಲಾಸಂಸ್ಕøತಿಯ ಮನೆತನದಲ್ಲಿ ಹುಟ್ಟಿದಬಾಲಸರಸ್ವತಿ ಅವರು ನೃತ್ಯಕ್ಕೇ ಜನ್ಮತಳೆದಂತಿತ್ತು. ಇವರು ತಮ್ಮ ನಾಲ್ಕನೆಯವರ್ಷದಿಂದಲೇ ಪಂಡನಲ್ಲೂರು ಕಂದಪ್ಪನ್ ಗುರುಗಳಲ್ಲಿ ನೃತ್ಯ ಆರಂಭಿಸಿ ತಮ್ಮ ಏಳನೆಯ ವಯಸ್ಸಿನಲ್ಲಿ ಕಾಂಚೀಪುರದ ಕಾಮಾಕ್ಷಿ ಅಮ್ಮಾಳ್ ದೇವಾಲಯದಲ್ಲಿ ಪ್ರಥಮಬಾರಿಗೆ ನೃತ್ಯ ಪ್ರದರ್ಶನ ನೀಡಿ ವಿದ್ವಜ್ಜನರನ್ನು ಬೆರಗುಗೊಳಿಸಿದರು.

ತಾವು ಬದುಕಿದ್ದ 65 ವರ್ಷಗಳ ಕಾಲವೂ ಭರತನಾಟ್ಯ ಸಂಪ್ರದಾಯದ ಶ್ರೇಷ್ಠ ಪ್ರತಿನಿಧಿ ಎನಿಸಿಕೊಂಡರು. ಅಷ್ಟೇ ಆಲ್ಲದೆ ಭರತನಾಟ್ಯ ಕಲೆಯ ದಿವ್ಯ ಸೌಂದರ್ಯವನ್ನು ಜಗತ್ತಿಗೆ ತೋರ್ಪಡಿಸಿ ಕಲಾವಿಮರ್ಶಕರ ಮೆಚ್ಚುನುಡಿಗಳಿಗೆ ಪಾತ್ರರಾದರು. ಇವರು ದೈಹಿಕವಾಗಿ ಅಷ್ಟೊಂದು ಸುಂದರವಾಗಿ ಕಾಣದಿದ್ದರೂ ತಮ್ಮ ನೃತ್ಯ ಸೌಂದರ್ಯದಿಂದ ಜಗತ್ತನ್ನೇ ಬೆರಗುಗೊಳಿಸಿರುವರು. ಇವರ ಕೀರ್ತಿ ಭಾರತಕ್ಕಿಂತ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಹರಡಿದೆ. ಅಂದ ಮಾತ್ರಕ್ಕೆ ಬಾಲಸರಸ್ವತಿ ಅವರ ಕಲಾ ಬದುಕೆಲ್ಲ ಹಸನಾಗಿರಲಿಲ್ಲ; ಸುಖವಾಗಿರಲಿಲ್ಲ. ಇವರ ಕಲಾ ಪ್ರಪಂಚದಲ್ಲಿ ಉಬ್ಬರವಿಳಿತಗಳಿದ್ದವು. ಕಟುಟೀಕೆ ಅನಾದರಣೆಗೂ ಗುರಿಯಾಗಿದ್ದರು. ತನ್ನ ಮನಸ್ಸು ಹತಾಶಗೊಂಡಿದೆ ಎಂದು ಇವರು ಹಲವುಬಾರಿ ನೊಂದು ನುಡಿದದ್ದುಂಟು. ಅಂತರಂಗದಲ್ಲಿ ಅತೀವ ಕ್ಷೋಭೆಯಿದ್ದರೂ ಎಂದೂ ಅದನ್ನು ಹೊರಗೆ ತೋರಿಸದೆ ನೋವಿನಮೇಲೆ ಮುಸುಕೆಳೆದು ತಮ್ಮ ಕಲಾ ಸಿರಿವಂತಿಕೆಯಿಂದ, ಅಭಿನಯದಿಂದ ನೋಡುವ ಕಣ್ಣುಗಳಿಗೆ ನಲಿವು ನೀಡುತ್ತಿದ್ದರು.

ಈ ಕಲಾವಿದೆಯ ಬದುಕಿನಲ್ಲಿ ಕಲಾವಿದೆಯೊಬ್ಬಳಿಗೆ ಸಲ್ಲಬೇಕಾದ ಪುರಸ್ಕಾರಗಳೆಲ್ಲ ಸಂದಿವೆ. ಮದರಾಸು ಸಂಗೀತನಾಟಕ ಅಕಾಡೆಮಿ ಇವರನ್ನು ಎಂದೋ ಗೌರವಿಸಿತು. 1955ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಾಶಸ್ತಿ ನೀಡಿತು 1964ರಲ್ಲಿ ರವೀಂದ್ರ ಭಾರತಿ ವಿಶ್ವವಿದ್ಯಾಲಯ ಇವರಿಗೆ ಗೌರವಡಾಕ್ಟರೇಟ್ ಪದವಿ ನೀಡಿತು. 1957ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿತು. 1973ರಲ್ಲಿ ಸಂಗೀತ ಕಲಾನಿಧಿ ಗೌರವ ಪ್ರಶಸ್ತಿ ನೀಡಿತು.

ಇವರು ಹಲವುಬಾರಿ ಅಮೆರಿಕಾ ಕಲಾಯಾತ್ರೆ ನಡೆಸಿ ಅಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದರು. 1977ರಲ್ಲಿ ತಮ್ಮ ಪುತ್ರಿ ಲಕ್ಷ್ಮಿಯ ಜೊತೆಗೂಡಿ ಐದು ತಿಂಗಳ ಕಾಲ ಅಮೆರಿಕದ ಹದಿನೈದು ಸಂಸ್ಥಾನಗಳಲ್ಲಿ ಸಂಚರಿಸಿ ನೃತ್ಯಪ್ರರ್ಶನಗಳನ್ನು ನೀಡಿದರು.

1963ರಲ್ಲಿ ಬ್ರಿಟನ್ನಿನ ಎಡಿನ್‍ಬರೋ ಕಲಾಮಹೋತ್ಸವಗಳಲ್ಲಿ ಪಾಲ್ಗೊಂಡು ತಮ್ಮ ನೃತ್ಯ ಪ್ರದರ್ಶನಗಳಿಂದ ಇಡೀ ಯೂರೋಪಿನ ಗಮನ ಸೆಳೆದರು. ಅದರಲ್ಲೂ `ಕೃಷ್ಣಾ ನೀ ಬೇಗನೆ ಬಾರೋ ಎಂಬ ಪುರಂದರದಾಸರ ಕೀರ್ತನೆಗೆ ಇವರು ನೀಡಿದ್ದ ಶ್ರೇಷ್ಠ ಅಭಿನಯ ಪ್ರೇಕ್ಷಕರನ್ನು ಚಕಿತಗೊಳಿಸಿ ಪಾಶ್ಚಾತ್ಯರ ಹೃದಯವನ್ನು ಸೂರೆಗೊಂಡಿತು.

ನೃತ್ಯಕಾರರು ಸಾಮಾನ್ಯವಾಗಿ ತಮಗೆ ಪ್ರಿಯವಾದ ಒಂದು ರಸದ ಪುಷ್ಟೀಕರಣದಲ್ಲಿ ತಮ್ಮ ಔನ್ನತ್ಯ ಮೆರೆಯುತ್ತಾರೆ. ಆದರೆ ಬಾಲಸರಸ್ವತಿಯವರು ಯಾವುದೇ ರಸವನ್ನಾಗಲಿ ಅತ್ಯಂತ ಮನೋಜ್ಞವಾಗಿ, ತಮ್ಮ ಹಾವಭಾವಗಳಿಂದ ತೋರಿಸಿ ಪ್ರೇಕ್ಷಕರನ್ನು ಮೂಕರಾಗಿಸಿ ತಮ್ಮ ಕಲಾವಂತಿಕೆ ಮೆರೆಯುತ್ತಿದ್ದ ಶ್ರೇಷ್ಠ ಕಲಾವಿದೆಯಾಗಿದ್ದರು.

ಕಲಾವಿದೆಯ ಕಲಾಭಿಜ್ಞತೆಯನ್ನು ತೋರಿಸಲು ಚಲನಚಿತ್ರ ಜಗತ್ತಿನ ಶ್ರೇಷ್ಠ ನಿರ್ದೇಶಿಕರೆನಿಸಿದ ಸತ್ಯಜಿತ್‍ರೇ ಅವರು ಈಕೆಯನ್ನು ಕುರಿತಂಥ ಅರ್ಧ ತಾಸಿನ ವರ್ಣಚಿತ್ರವೊಂದನ್ನು ತಯಾರಿಸಿದ್ದಾರೆ.
(ವಿ.ಎಸ್‍ಎಚ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ